ನ್ಯಾಯವೂ ಒಂದು ಕಲೆ. ಈ ಭಾವನೆ ಇಂಗ್ಲಿಷ್ ನ್ಯಾಯದ ಅಪ್ರತಿಮ ಸೌಂದರ್ಯಕ್ಕೆ ಕಾರಣವಾಯಿತು. ಇದರಿಂದಾಗಿ ಇಂಗ್ಲಿಷ್ ನ್ಯಾಯ ವ್ಯವಹಾರ್ಯವೂ ವೈಶಿಷ್ಟ್ಯವುಳ್ಳದ್ದೂ ಆಯಿತು. ವ್ಯಕ್ತಿಯ ಸ್ವಾತಂತ್ರ್ಯ ಇಂಗ್ಲಿಷ್ ನ್ಯಾಯದ ಅಡಿಗಲ್ಲು. ಅಲ್ಲಿಯ ರಾಣಿ ಅಥವಾ ರಾಜ ನಿರಂಕುಶತೆಯಿಂದ ರಾಜ್ಯಪರಿಪಾಲನೆ ಮಾಡುವುದು ಅನೇಕಾನೇಕ ಕಾಯಿದೆಗಳಿಂದ ಅಸಾಧ್ಯ. ಇಂಗ್ಲೆಂಡಿನಲ್ಲಿ ನ್ಯಾಯಕಟ್ಟಳೆಗೇ (ರೂಲ್ ಆಫ್ ಲಾ) ಬೆಲೆ. ಯಾವನೂ ನ್ಯಾಯವಿಚಾರದಲ್ಲಿ ಮನಸ್ವಿಯಾಗಿ ವರ್ತಿಸುವಂತಿಲ್ಲ. ಇಂಗ್ಲೆಂಡಿನಲ್ಲಿ ರಾಣಿ ಅಥವಾ ರಾಜ ರಾಜ್ಯಭಾರ ಮಾಡುತ್ತಿದ್ದರೂ ಅಲ್ಲಿ ಪ್ರಜಾಪ್ರಭುತ್ವ ಬಲವಾಗಿ ಬೇರುಬಿಟ್ಟು ನಿಂತಿದೆ. ಅಲ್ಲಿಯ ನ್ಯಾಯವನ್ನು ಪ್ರಜಾಸತ್ತಾತ್ಮಕ ರಾಷ್ಟ್ರಗಳು ಆದರ್ಶವಾಗಿ ಇಟ್ಟುಕೊಂಡರೆ ಆಶ್ಚರ್ಯವಿಲ್ಲ. ಅಲ್ಲಿಯ ನ್ಯಾಯ ಚಿರಾಯು, ಶಾಂತಿಸಾಧಕ ಎಂದು ಆ ದೇಶದ ಜನರ ನಂಬುಗೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ